ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನ

ಸ್ಥಳ ಪರಿಚಯ

ಕರ್ನಾಟಕ ರಾಜ್ಯ, ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಕಳಸ ಗ್ರಾಮದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನವಿದೆ. ಸಹ್ಯಾದ್ರಿ ಪಶ್ಚಿಮಘಟ್ಟದಲ್ಲಿ ಕಳಸ ಗ್ರಾಮವು ಸುತ್ತಮುತ್ತಲೂ ಬೆಟ್ಟಗಳಿಂದ , ಹಸಿರು ತುಂಬಿದ ಅರಣ್ಯದಿಂದ ಹಾಗೂ ಚಿಕ್ಕಚಿಕ್ಕಜಲಪಾತಗಳಿಂದ ಹಾಗೂ ಭದ್ರನದಿಯ ಸುಂದರ ಪರಿಸರದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನ ಸ್ಥಾಪಿಸಲ್ಪಟ್ಟಿದೆ.

ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ.ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮುನಿಯೇ ಕಾರಣರಾಗಿದ್ದಾರೆ.

ಪೌರಾಣಿಕ ಹಿನ್ನಲೆ

ಮಿತ್ರ ವರುಣರೆಂಬ ಋಷಿ ಸಹೋದರರಿಬ್ಬರೂ ವಿಹಾರ ಮಾಡುತ್ತಾ ತುಂಗಭದ್ರಾ ನದಿಯ ತೀರದಲ್ಲಿ ತಪಸ್ಸು ಮಾಡುತ್ತಿರಲು ಇವರ ತಪಸ್ಸಿನಿಂದ ಭೀತಗೊಂಡ ಇಂದ್ರನು ತಪಸ್ಸನ್ನು ಭಂಗ ಮಾಡಲು ಊರ್ವಶಿ ಎಂಬ ಅಪ್ಸರೆಯನ್ನು ಕಳುಹಿಸುತ್ತಾನೆ. ಈಕೆಯ ದೆಸೆಯಿಂದ ಮಿತ್ರ ವರುಣರು ತಪಸ್ಸಿನಿಂದ ಬಹಿರ್ಮುಖರಾಗಿ ಮೋಹ ಪರವಶರಾಗಲು ಇವರ ದೇಹದಲ್ಲಿ ಶುಕ್ಲವು ಪ್ರಸರಿಸುವಂತಾಗಲು ಹಾಗೂ ಮಿತ್ರವರುಣರು ಬಹುದಿನಗಳ ಕಾಲ ತಪಸ್ಸು ಮಾಡಿರುವ ಕಾರಣ ಉತ್ತಮರ ಅವಿರ್ಭಾವ ಆಗಬಹುದೆಂದು ಯೋಚಿಸಿ ಶುಕ್ಲವು ಭೂಪನವಾದಂತೆ ದೇವತೆಗಳು ಒಂದು ಕಲಶ ಸ್ಥಾಪನೆ ಮಾಡಿದರು ಅದರಂತೆ ಶ್ರೇಷ್ಠರಾದ ಅಗಸ್ತ್ಯರ ಅವಿರ್ಭಾವವಾಯಿತು. ಕಲಶದ ಹೊರಗೆ ಚೆಲ್ಲಿದ ರೇತಸ್ಸಿನಿಂದ ಹಿಂದೆ ನಿಮಿಚಕ್ರವರ್ತಿಯಿಂದ ಶಾಪಗ್ರಸ್ತರಾಗಿದ್ದ ವಸಿಷ್ಠರ ಜನನವಾಯಿತು. ಅಗಸ್ತ್ಯರು ಗಂಧಪುಷ್ಪ ಧೂಪ ದೀಪಗಳಿಂದ ಪರಶಿವನನ್ನು ಆರಾಧಿಸಿ ದ್ಯಾನ ಪರವಶವಾಗಲು ಮಹದೇವನು ಕುರಿತು ನನ್ನ ಜನ್ಮ ಸ್ಥಳವಾದ ಕಲಶದಲ್ಲಿ ನೀನು ಕಲಶೇಶ ಎಂಬ ಅಭಿದಾನದಿಂದ ಆವಿರ್ಭವಿಸಿ ಭಕ್ತಾಧಿಗಳಿಗೆ ಕಲ್ಯಾಣವನ್ನು ಕೊಡುತ್ತ ಕಲಾಂತದವರೆವಿಗೂ ಇರಬೇಕೆಂದು ಪ್ರಾರ್ಥಿಸಲು ಭಕ್ತವತ್ಸಲನಾದ ಶ್ರೀ ಶಂಕರನು ಅಗಸ್ತ್ಯರು ಕೋರಿದ ವರವನ್ನು ಕರುಣಿಸಿ ಅಂತರ್ಧಾನನಾದನು , ಹೀಗೆ ಅಗಸ್ತ್ಯರ ಅನುಗ್ರಹರ್ಥವಾಗಿ ದೇವತೆಗಳಿಂದ ಸ್ಥಾಪಿತವಾದ ಕಲಶದಲ್ಲಿ ಶ್ರೀ ಸ್ವಾಮಿಯು ಉದ್ಬವಿಸಿದ ಕಾರಣ ಈಶ್ವರನಿಗೆ ಇಲ್ಲಿಗೆ ‘ಕಲಶೇಶ’ ಎಂದು ನಾಮಂಕಿತವಾಯಿತು.